1967-. ಪ್ರಸಿದ್ಧ ಓಟಗಾರ್ತಿ. 1967 ಅಕ್ಟೋಬರ್ 21ರಂದು ಕೊಡಗು ಜಿಲ್ಲೆ ಮಡಿಕೇರಿಯಲ್ಲಿ ಜನಿಸಿದರು. ತಂದೆ-ತಾಯಿ ಮೊದಲು ಮೈಸೂರು ಮತ್ತು ಕೋಲ್ಕತ್ತದಲ್ಲಿದ್ದು ಅನಂತರ ಬೆಂಗಳೂರಿನಲ್ಲಿ ನೆಲಸಿದರು. ಅಶ್ವಿನಿ ಮತ್ತು ಈಕೆಯ ಸಹೋದರಿ ಪುಷ್ಪ ಬಾಲ್ಯದಿಂದಲೂ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಸಾಧನೆಯಲ್ಲಿ ತೊಡಗಿದರು. ಓಟಗಾರ್ತಿಯರಾದರು. ಕಠ್ಮಂಡುವಿನ ದಕ್ಷಿಣ ಏಷ್ಯ ಫೆಡರೇಷನ್ (ಎಸ್ಎಎಫ್) ಆಟೋಟಗಳ ಸ್ಪರ್ಧೆಯಲ್ಲಿ ಭಾಗವಹಿಸಿದರು. ಇದು ಇವರು ಭಾಗವಹಿಸಿದ ಮೊದಲನೆಯ ಅಂತಾರಾಷ್ಟ್ರೀಯ ಕ್ರೀಡಾಕೂಟ. ಇದರಲ್ಲಿ ಪುಷ್ಪ 4x400 ಮೀ ರಿಲೇ ಓಟದಲ್ಲಿ ಚಿನ್ನದ ಪದಕವನ್ನೂ ಅಶ್ವಿನಿ 4x100ಮೀ ರಿಲೆಯಲ್ಲಿ ಕಂಚಿನ ಪದಕವನ್ನೂ ಪಡೆದರು. ಅಶ್ವಿನಿ ಅವರ ಭವಿಷ್ಯದಬಗ್ಗೆ ಕ್ರೀಡಾBiಮಾನಿಗಳಲ್ಲಿ ಅಪಾರ ಭರವಸೆ ಮೂಡಿತು. ಇವರ ಓಟದ ತೀವ್ರತೆ ಹಾಗೂ ಶೈಲಿ ಅಪೂರ್ವವೆನಿಸಿತ್ತು. ಇದಕ್ಕೆ ಮುನ್ನ 1985ರ ಏಷ್ಯನ್ ಟ್ಯ್ನ್ರಾಕ್ ಅಂಡ್ ಫೀಲ್ಡ್‌ ಮೀಟ್‌ನಲ್ಲಿ 400ಮೀ ಕಂಚಿನ ಪದಕ ಪಡೆದರು. 1986ರ ಅಖಿಲ ಭಾರತ ಚಾಂಪಿಯನ್ಷಿಪ್ ಸ್ಪರ್ಧೆಯಲ್ಲಿ ಇವರು ಪಾಲ್ಗೊಂಡು, 200ಮೀ ಹಾಗೂ 1987ರ ರಾಷ್ಟ್ರೀಯ ಕ್ರೀಡಾಕೂಟದಲ್ಲಿ 100ಮೀ ಓಟಗಳಲ್ಲಿ ಚಿನ್ನದ ಪದಕಗಳನ್ನು ಗಳಿಸಿದರು.

1987ರಲ್ಲಿ ಸಿಂಗಪುರದಲ್ಲಿ ನಡೆದ ಏಷ್ಯನ್ ಟ್ರ್ಯಾಕ್ ಅಂಡ್ ಫೀಲ್ಡ್‌ ಮೀಟ್‌ನಲ್ಲಿ 100ಮೀ ಓಟದಲ್ಲಿ ಚಿನ್ನದ ಪದಕವನ್ನೂ 200ಮೀ ಓಟದಲ್ಲಿ ಬೆಳ್ಳಿಯ ಪದಕವನ್ನೂ ಗಳಿಸಿ ಭಾರತದ ವೇಗದ ಓಟಗಾರ್ತಿಯರ ಗುಂಪಿಗೆ ಸೇರ್ಪಡೆಗೊಂಡರು. 1989ರ ಎಸ್.ಎ.ಟಿ. ಗೇಮ್ಸ್‌ನಲ್ಲಿ ಇವರು ಇಸ್ಲಾಮಾಬಾದಿನಲ್ಲಿ 2 ಚಿನ್ನದ ಪದಕಗಳನ್ನು ತಮ್ಮದಾಗಿಸಿಕೊಂಡು ಪಿ.ಟಿ.ಉಷಾರವರಿಗೆ ಸರಿಸಾಟಿಯಾದ ಓಟಗಾರ್ತಿ ಎನಿಸಿಕೊಂಡರು.

1991ರಲ್ಲಿ ಕೋಲ್ಕತ್ತದ ಸಾಲ್ಟ್‌ ಲೇಕ್ ಸ್ಟೇಡಿಯಮ್ನಲ್ಲಿ ಇವರ ಸಾಧನೆ ಅಮೋಘ ವಾದದ್ದು. ಇವರು ಭಾಗವಹಿಸಿದ ಎಲ್ಲ ಓಟಗಳಲ್ಲಿಯೂ ಚಿನ್ನದ ಪದಕ ಗಳಿಸಿ ತಮ್ಮ ಸಾಧನೆಯನ್ನು ಗಟ್ಟಿಗೊಳಿಸಿಕೊಂಡರು. 100ಮೀ (11.8ಸೆ), 200ಮೀ (24ಸೆ.), 400ಮೀ (53.4ಸೆ.) ಮತ್ತು 4x400ಮೀ ರಿಲೇ ಇದು ಭಾರತದಲ್ಲಿ ಇವರ ದಾಖಲೆ.

ಅಶ್ವಿನಿ ಅವರು ಚಿತ್ರರಂಗವನ್ನೂ ಪ್ರವೇಶಿಸಿದರು. ಓಟಗಾರ್ತಿಯ ಬದುಕನ್ನಾಧರಿಸಿದ ಅಶ್ವಿನಿ ಎಂಬ ತೆಲುಗು ಚಿತ್ರದಲ್ಲಿ ಇವರು ನಾಯಕಿಯ ಪಾತ್ರದಲ್ಲೂ ಅಭಿನಯಿಸಿದರು. ಪ್ರಸ್ತುತ ಇವರು ವಿಜಯಾ ಬ್ಯಾಂಕ್‌ನಲ್ಲಿ ಅಧಿಕಾರಿಯಾಗಿ ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಭಾರತ ಸರ್ಕಾರ ಇವರಿಗೆ ಅರ್ಜುನ ಪ್ರಶಸ್ತಿ ನೀಡಿ ಗೌರವಿಸಿದೆ (1988).

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ